ಮೀನು, ಮಾಂಸ, ಮೊಟ್ಟೆ ಮುಂತಾದ ಆಹಾರಗಳನ್ನು ವಿವಿಧ ಸಂಸ್ಕರಣೆಯ ವಿಧಾನಗಳಿಂದ ಹೇಗೆ ಸಂರಕ್ಷಿಸಬಹುದು ಎನ್ನುವ ವಿಚಾರದಲ್ಲಿ ಇಲ್ಲಿ ಪ್ರಯೋಗಗಳು ನಡೆಯುತ್ತಿವೆ. ಒಂದು ಋತುವಿನಲ್ಲಿ ಅಧಿಕವಾಗಿ ಸಿಕ್ಕಿ, ಉಪಯೋಗಿಸಲಾಗದೆ ಈಗ ನಷ್ಟವಾಗುತ್ತಿರುವ ಸಮುದ್ರ ಮೀನುಗಳಿಂದ ದ್ರಾವಕ ಸಂಸ್ಕರಣೆಯಿಂದ ಪೋಷಣೆಗೆ ಉತ್ತಮವಾದ ಮೀನಿನ ಪುಡಿ ತಯಾರಿಸುವುದು, ಮೊಟ್ಟೆಗಳಿಂದ ಒಣಗಿದ ಪುಡಿ ತಯಾರಿಕೆ, ಮಾಂಸಗಳಿಂದ ಮತ್ತು ಮೀನಿನಿಂದ ಸಾಸೇಜ್ ಮತ್ತು ಒಣಗಿದ ಪದಾರ್ಥ ಪಡೆಯುವುದು-ಈ ಕೈಗಾರಿಕೆಗಳಿಗೆ ಬೇಕಾದ ತಂತ್ರಜ್ಞಾನವನ್ನು ಇಲ್ಲಿ ಕಂಡುಕೊಂಡು ಕೈಗಾರಿಕೆಯವರಿಗೆ ಒದಗಿಸಲಾಗುತ್ತಿದೆ. ಮಂಗಳೂರಿನಲ್ಲಿರುವ ಸಂಸ್ಥೆಯ ಶಾಖೆಯೊಂದು ಮೀನುಗಳ ವಿಚಾರದ ಸಂಶೋಧನೆಗಳಿಗಾಗಿಯೇ ಮೀಸಲಾಗಿದೆ. ಆಧುನಿಕ ತಂತ್ರಪ್ರಯೋಗದಿಂದ ಮೀನುಗಳನ್ನು ಡಬ್ಬಗಳಲ್ಲಿ ಸಂಗ್ರಹಿಸುವುದು, ಶೈತ್ಯದಲ್ಲಿ ಹೆಪ್ಪುಗಟ್ಟಿಸುವುದು, ಆರ್ದ್ರೀಕರಿಸುವುದು, ರಾಸಾಯನಿಕಗಳಿಂದ ಮತ್ತು ಕಿರಣ ಪ್ರಯೋಗದಿಂದ ಕೆಡದಂತೆ ಇರಿಸುವುದು ಮೊದಲಾದ ವಿಚಾರಗಳಲ್ಲಿ ಇಲ್ಲಿ ಉಪಯುಕ್ತ ಕೆಲಸಗಳು ನಡೆದಿವೆ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ